ಅಕ್ಸೊಲಾಟಲ್
ಸಿಹಿನೀರಿನ ತೊರೆ, ಕೊಳಗಳಲ್ಲಿ ವಾಸಿಸುವ ಅಂಬ್ಲಿಸ್ಟೋಮ ಜಾತಿಯ ಉಭಯಜೀವಿ ಸಲಮಾಂಡರಿನ ಲಾರ್ವ ಅಥವಾ ಡಿಂಭವೇ ಅಕ್ಸೊಲಾಟಲ್. ರೂಪಾಂತರಣ ಹೊಂದಿದೆ. ಡಿಂಭಾವಸ್ಥೆಯಲ್ಲಿಯೇ ಲೈಂಗಿಕ ಪ್ರೌಢತೆಯನ್ನು ಹೊಂದಿ ಸಂತಾನೋತ್ಪತ್ತಿ ಮಾಡುವ ಹಂತವೇ ಅಕ್ಸೊಲಾಟಲ್. ಈ ವೈಶಿಷ್ಟ್ಯವನ್ನು ನಿಯೋಟಿನಿ ಅಥವಾ ಪೀಡೋಜೆನಿಸಿಸ್ ಎನ್ನುತ್ತಾರೆ. ಇದರ ದೇಹ ಹಲ್ಲಿಯಂತೆ ಇದ್ದು, ಪುಷ್ಟ ದೇಹ, ಎರಡು ಜೊತೆ ಕಾಲುಗಳು, ಈಜು ಪೊರೆ ಆವರಿಸಿದ ತುಂಡಾದ ಬಾಲ ಹೊಂದಿದೆ. ತಲೆಯು ವಿಶಾಲವಾಗಿದ್ದು ರೆಪ್ಪೆಗಳಿಲ್ಲದ ಕಣ್ಣುಗಳನ್ನು ಹೊಂದಿದೆ. ತಲೆಯ ಹಿಂಭಾಗದಲ್ಲಿ ಮೂರು ಜೊತೆ ಹೊರ ಕಿವಿರುಗಳಿವೆ. ಇವು ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಅಕ್ಸೊಲಾಟಲ್À ರೂಪ ಪರಿವರ್ತನೆ ಹೊಂದಲು ಥೈರಾಕ್ಸಿನ್ ಎಂಬ ಒಂದು ಚೋದಕ ವಸ್ತುವಿನ ಅವಶ್ಯಕತೆ ಇದೆ. ಅದರ ತಯಾರಿಕೆಗೆ ಅಯೋಡಿನ್ ಅತಿ ಮುಖ್ಯ. ನೀರಿನಲ್ಲಿ ಅಯೋಡಿನ್ ಕೊರತೆ ಇದ್ದಾಗ ಚೋದಕವು ಸ್ರವಿಸಲಾಗುವುದಿಲ್ಲ. ಆದ್ದರಿಂದ ಕುಂಠಿತಗೊಂಡ ಡಿಂಭವು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುತ್ತದೆ. 
								
                                                                     
(ಡಾ||ಎನ್.ಎಸ್.ಲೀಲಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ